ತೊಗರಿ -
ದ್ವಿದಳ ಧಾನ್ಯಗಳಲ್ಲೆಲ್ಲ ಅತ್ಯಂತ ಜನಪ್ರಿಯವಾದ ಒಂದು ಸಸ್ಯ. (ರೆಡ್ ಗ್ರ್ಯಾಮ್, ಪಿಜನ್ ಪೀ). ಲೆಗ್ಯುಮಿನೋಸೀ (ಫ್ಯಾಬೇಸೀ) ಕುಟುಂಬದ ಪ್ಯಾಪಿಲಿಯೊನಾಯ್ಡಿ ಗುಂಪಿಗೆ ಸೇರಿದೆ. ಇದರ ವೈe್ಞÁನಿಕ ಹೆಸರು ಕಜಾನಸ್ ಕಜನ್. ಇದರ ಕಾಳನ್ನು ಬೇಳೆಯ ರೂಪದಲ್ಲಿ ಆಹಾರವಾಗಿ ಉಪಯೋಗಿಸುವುದು ಎಲ್ಲರಿಗೂ ತಳಿದದ್ದೇ. ಇದರ ಕಾಳಿನಲ್ಲಿ ಹೆಚ್ಚು ಪ್ರೋಟೀನ್ ಅಂಶವಿರುವುದರಿಂದ ಈ ಬೇಳೆ ದ್ವಿದಳ ಧಾನ್ಯಗಳ ಬೆಳೆಗಳಲ್ಲಿ ಮೊದಲನೆಯ ಸ್ಥಾನವನ್ನು ಪಡೆದು, ಬಹಳ ಜನರ ದಿನನಿತ್ಯದ ಆಹಾರವಾಗಿದೆ. ಬೇಳೆಯನ್ನು ಬೇರ್ಪಡಿಸಿದ ಮೇಲೆ ಉಳಿಯುವ ಸಿಪ್ಪೆ ಕರಾವಿನ ದನಗಳಿಗೆ ಒಳ್ಳೆಯ ಆಹಾರ. ತೊಗರಿಗಿಡದ ಕಡ್ಡಿಗಳನ್ನು ಬುಟ್ಟಿ ಹೆಣೆಯಲು, ಚಾವಣಿ ತಯಾರಿಸಲು ಬಳಸುವರು. 

ತೊಗರಿ ಗಿಡ ಸಾವಿರಾರು ವರ್ಷಗಳಿಂದ ಬೇಸಾಯದಲ್ಲಿದೆ ಎಂಬು ಹೇಳಲಾಗಿದೆ. ಸ್ಟರ್ಟವಾಂಟ್ ಎಂಬಾತನ ಪ್ರಕಾರ ಕ್ರಿ.ಪೂ. 2200-24 ರ ಕಾಲದ ಈಜಿಪ್ಟ್ ಸಮಾಧಿಗಳಲ್ಲಿ ತೊಗರಿಬೇಳೆ ಸಿಕ್ಕಿದೆ. ಭಾರತದಲ್ಲೂ ಸಾವಿರಾರು ವರ್ಷಗಳಿಂದ ಇದರ ಬೇಸಾಯ ಉಂಟು. ಇಷ್ಟು ಪ್ರಚೀನ ಬೆಳೆಯಾಗಿದ್ದರೂ ಕೂಡ ಇದರ ತವರಿನ ಬಗ್ಗೆ ಭಿನ್ನಾಭಿಪ್ರಾಯಗಳು ಉಂಟು. ಭಾರತದಲ್ಲಿ ಎಲ್ಲಿಯೂ ಕಾಡುಗಿಡವಾಗಿ ಇದು ಕಾಣದೊರೆಯದು. ಆದರೆ ಆಫ್ರಿಕದ ಮೇಲಣ ನೈಲ್ ಪ್ರದೇಶ ಮತ್ತು ಅಂಗೋಲದ ಕರಾವಳಿ ವಲಯಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತವೆ. ಇದರಿಂದಾಗಿ ತೊಗರಿ ಗಿಡ ಆಫ್ರಿಕದ ಮೂಲವಾಸಿ ಎಂದು ಬಗೆಯಲಾಗಿದೆ. ಜಾಂಜಿûಬಾರ್, ಭಾರತ ಸಿಲೋನ್‍ಗಳ ನಡುವೆ ಪ್ರಯಾಣಿಸುತ್ತಿದ್ದ ವ್ಯಾಪಾರಿಗಳು ಇದನ್ನು ಭಾರತಕ್ಕೆ ತಂದರೆಂದು ಹೇಳಲಾಗಿದೆ. ಆಫ್ರಿಕದಿಂದ ವೆಸ್ಟ್ ಇಂಡೀಸ್‍ಗೂ ಬ್ರಜಿûಲ್, ಗೈಯಾನ (ಬ್ರಿಟಿಷ್ ಗಿಯಾನ್) ಗಳಿಗೂ ಇದು ಹರಡಿತು. ಸುಮಾರು 90 ವರ್ಷಗಳ ಹಿಂದೆ ಆಸ್ಟ್ರೇಲಿಯಕ್ಕೆ ಕಾಲಿಟ್ಟ ಇದು ಅಲ್ಲಿ ಮೇವಿನ ಬೆಳೆಯಾಗಿ ಪ್ರಸಿದ್ಧವಾಗಿದೆ. ವ್ಯಾಟ್ ಎಂಬ ವಿe್ಞÁನಿಯ ಪ್ರಕಾರ ಲೂರ್‍ಸಿರೊ ಎಂಬಾತ ಚೀನ, ವಿಯಟ್ನಾಮ್, ಲಾವೋಸ್ ಮತ್ತು ಕಾಂಬೋಡಿಯಗಳಲ್ಲಿ ತೊಗರಿ ಕೃಷಿಸಸ್ಯವಾಗಿಯೂ ಕಾಡುಗಿಡವಾಗಿಯೂ ಬೆಳೆಯುವುದನ್ನು ಉಲ್ಲೇಖಿಸಿದ್ದಾನೆ. ಭಾರತದಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ಮಹಾರಾಷ್ಟ್ರ, ಗುಜರಾತ್, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳು ತೊಗರಿ ಬೇಸಾಯಕ್ಕೆ ಪ್ರಸಿದ್ಧವಾಗಿವೆ.
ತೊಗರಿಗಿಡ ಸುಮಾರು 2'-12' ಎತ್ತರ ಎತ್ತರ ಬೆಳೆಯುವ ಏಕವಾರ್ಷಿಕ ಇಲ್ಲವೆ ಬಹುವಾರ್ಷಿಕ ಗಿಡ. ಹೆಚ್ಚು ಕವಲುಗಳಿಂದ ಕೂಡಿದ್ದು ಪೊದೆಯಾಗಿ ಬೆಳೆಯುತ್ತದೆ. ಬೇರುಗಳು ಬಲು ಆಳವಾಗಿ ಭೂಮಿಯಲ್ಲಿ ಇಳಿದು ಲೆಗ್ಯುಮಿನೋಸೀ ಕುಟುಂಬದ ಇತರ ಸಸ್ಯಗಳಲ್ಲಿರುವಂತೆ ಬ್ಯಾಕ್ಟೀರಿಯ ಗಂಟುಗಳಿಂದ ಕೂಡಿವೆ. ಎಲೆಗಳು ಸಂಯುಕ್ತ ಮಾದರಿಯವು. ಪ್ರತಿಯೊಂದರಲ್ಲೂ ಮೂರು ಕಿರುಪತ್ರಗಳುಂಟು. ಕಿರುಪತ್ರಗಳ ಆಕಾರ ಭರ್ಜಿಯಂತೆ. ಎಲೆಯ ಬುಡದಲ್ಲಿ ಅನೇಕ ಗ್ರಂಥಿಗಳಿವೆ. ಪುಷ್ಪಮಂಜರಿ ಅಂತ್ಯಾರಂಭಿ ಬಗೆಯದು. ಹೂಗಳು ಬಣ್ಣ ಹಳದಿ. ಒಂದೊಂದರಲ್ಲೂ 5 ಪುಷ್ಪಪತ್ರಗಳು, 5 ದಳಗಳು, 10 ಕೇಸರಗಳು, ಒಂದೇ ಕಾರ್ಪೆಲಿನ ಅಂಡಾಶಯ ಉಂಟು. ಕಾಯಿ ಲೆಗ್ಯುಮ್ ಮಾದರಿಯದು. ಕಾಯಿಯ ಉದ್ದ 2"-4" ; ಅಗಲ 1/4". ಪ್ರತಿಯೊಂದು ಕಾಯಿಯಲ್ಲಿ 2-5 ಬೀಜಗಳುಂಟು.

ತೊಗರಿಯನ್ನು ಶುದ್ಧ ಬೆಳೆಯಾಗಿ ಇಲ್ಲವೇ ರಾಗಿ, ಜೋಳ ಅಥವಾ ಸಜ್ಜೆಗಳೊಂದಿಗೆ 6' ಅಂತರದ ಸಾಲುಗಳಲ್ಲಿ ಮಿಶ್ರ ಬೆಳೆಯಾಗಿ ಬೆಳೆಯುತ್ತಾರೆ. ಇದರ ಬೇರುಗಳು ಉದ್ದವಾಗಿ ಇರುವುದರಿಂದ, ಆಳ ಬೇರುಗಳಿಲ್ಲದ ಬೆಳೆಗಳ ಜೊತೆ ಮಿಶ್ರಬೆಳೆಯಾಗಿ ಬೆಳೆಸಬಹುದು. ಈ ಬೆಳೆಗೆ ಕೀಟ, ರೋಗ ಹಾಗೂ ಮಂಜಿನ ಹಾವಳಿಯನ್ನು ನಿರೋಧಿಸುವ ಸಾಮಥ್ರ್ಯ ಉಂಟು. ಇದು ಬಹು ವಾರ್ಷಿಕ ಬೆಳೆಯಾದರೂ 2 ಮತ್ತು 3ನೆಯ ವರ್ಷಗಳಲ್ಲಿ ಇಳುವರಿ ಬಹಳ ಕಡಿಮೆಯಾಗುವುದರಿಂದ ಸಾಮಾನ್ಯವಾಗಿ ಏಕವಾರ್ಷಿಕ ಬೆಳೆಯಾಗಿ ಬೆಳೆಸುತ್ತಾರೆ. ಜುಲೈ ತಿಂಗಳಲ್ಲಿ ಬಿತ್ತಾಲಾಗುವುದು. ಬೆಳೆ ಮಾರ್ಚ್ ತಿಂಗಳಿನಲ್ಲಿ ಕಟಾವಿಗೆ ಬರುತ್ತದೆ. ತೊಗರಿಗೆ ಹವೆಯ ಎಲ್ಲ ಬಗೆಯ ವೈಪರೀತ್ಯಗಳನ್ನು ತಡೆಯುವ ಸಾಮಥ್ರ್ಯ ಇರುವುದರಿಂದ ಇದಕ್ಕೆ ಹೆಚ್ಚು ಆರೈಕೆ ಬೇಕಾಗದು. ಇದಕ್ಕೆ ನೀರು ಚೆನ್ನಾಗಿ ಬಸಿಯುವ ಭೂಮಿ ಒಳ್ಳೆಯದು. ತೊಗರಿಯನ್ನು ಶುದ್ಧಬೆಳೆಯಾಗಿ ಬೆಳೆಯುವುದಾದರೆ ಎಕರೆಗೆ 6-8 ಕಿ. ಗ್ರಾಂ. ಬೀಜ ಬೇಕಾಗುತ್ತದೆ. ಮಿಶ್ರಬೆಳೆಗೆ ಸಾಲಿನ ಅಂತರದ ಮೇಲೆ ಈ ಪರಿಮಾಣ ವ್ಯತ್ಯಾಸವಾಗುತ್ತದೆ. ತೊಗರಿ ಫಾಸ್ಫರಸ್ ಗೊಬ್ಬರಕ್ಕೆ ಒಳ್ಳೆಯ ಪ್ರತಿಕ್ರಿಯೆ ತೋರಿಸುತ್ತದೆ. ಒಂದು ಹೆಕ್ಟೇರಿಗೆ 5,000-6,000 ಕಿ. ಗ್ರಾಂ. ಕಾಂಪೋಸ್ಟ್ ಮತ್ತು 25 ಕಿ. ಗ್ರಾಂ ನೈಟ್ರೊಜನ್ 50 ಕಿ.ಗ್ರಾಂ. ಫಾಸ್ಫರ್ ಮತ್ತು 25 ಕಿ.ಗ್ರಾಂ. ಪೊಟ್ಯಾಷ್ ರಾಸಾಯನಿಕ ಗೊಬ್ಬರ ಬೇಕಾಗುತ್ತದೆ.

ಭೂಮಿ ಹಸನಾದ ಬಳಿಕ ಗೊಬ್ಬರದ ಪೂರ್ಣ ಮೊತ್ತವನ್ನು ಹಾಕಿ, ಮಣ್ಣಿನಲ್ಲಿ ಮಿಶ್ರ ಮಾಡಲಾಗುತ್ತದೆ. ಬೀಜದ ಸಾಲುಗಳಿಗೆ 21/2 ದೂರದಲ್ಲಿ ರಾಸಾಯನಿಕ ಗೊಬ್ಬರ ಹಾಕುವುದುಂಟು. ಸಾಲಿನಲ್ಲಿ ಗಿಡಗಳು 12"-18 ಕ್ಕೆ ಒಂದರಂತೆ ನಿಲ್ಲುತ್ತವೆ. ಹೂಗಳು ಎರಡು ತಿಂಗಳು ಸತತವಾಗಿ ಬಿಡುತ್ತಿರುತ್ತವೆ. ಒಂದೇ ಸಮಯದಲ್ಲಿ ಹೂ, ಎಳೆಯ ಕಾಯಿ ಮತ್ತು ಬಲಿತ ಕಾಯಿಗಳನ್ನು ಕಾಣಬಹುದು. ಎಲೆಗಳೆಲ್ಲ ಒಣಗಿ ಉದುರಿದ ಮೇಲೆ ಗಿಡಗಳನ್ನು ಬುಡಮಟ್ಟಕ್ಕೆ ಕತ್ತರಿಸಿ ಕಣಕ್ಕೆ ಸಾಗಿಸಲಾಗುವುದು. ಅನಂತರ ದೊಣ್ಣೆಗಳಿಂದ ಬಡಿದು ಬೀಜಗಳನ್ನು ಬೇರ್ಪಡಿಸಲಾಗುವುದು. ಪೂರ್ಣ ಬೆಳೆಯಾಗಿ ಬೆಳೆದಾಗ ಹೆಕ್ಟೇರಿಗೆ 10-12 ಕ್ವಿಂಟಾಲ್ ಇಳುವರಿ ಪಡೆಯಬಹುದು.

ತೊಗರಿ ಬೆಳೆಗೆ ಕಾಯಿ ಕೊರೆಯುವ ಕೀಟ ಮತ್ತು ಸೊರಗು ರೋಗದ(ವಿಲ್ಟ್) ಹಾವಳಿ ಉಂಟು. ಕಾಯಿ ಕೊರೆಯುವ ಕೀಟದ ಕಂಬಳಿಹುಳ ಎಳೆಯ ಗರಿ, ಮೊಗ್ಗು ಮತ್ತು ಕಾಯಿಯನ್ನು ಕೊರೆದು ಬೀಜವನ್ನು ತಿನ್ನುತ್ತದೆ. ಸೊರಗು ರೋಗ ಫ್ಯೂಸೇರಿಯಮ್ ಯೂಡಮ್ ಎಂಬ ಶಿಲೀಂದ್ರದಿಂದ ಉಂಟಾಗುವುದು. ಇದು ತಗುಲಿದಾಗ ಎಲೆಗಳು ಒಣಗಿ ಮುರುಟಿಕೊಂಡು ಹೋಗಿ ಕೊನೆಗೆ ಗಿಡ ಸತ್ತು ಹೋಗುತ್ತದೆ. ಇವುಗಳ ಹಾವಳಿ ತಡೆಯಲು 181 ಲೀಟರ್ ನೀರಿನಲ್ಲಿ 72 ಗ್ರಾಂ. ಕಾರಬರಿಲ್ ಅಥವ 18 ಮಿ.ಲೀ. ಪ್ಯಾರಥಿಯಾನ್ ಅಥವಾ 9 ಮಿ.ಲೀ. ಫೆನಿಟ್ರೋಥಿಯನ್ ಅಥವಾ 36 ಮಿ. ಲೀ. ಎಂಡೋಸಲ್ಫಾನ್ ಅಥವಾ 100 ಗ್ರಾಂ. 50% ಡಿಡಿಟಿಯನ್ನು ಬೆರೆಸಿ ಸಿಂಪಡಿಸಲಾಗುವುದು. ಒಂದು ಹೆಕ್ಟೇರಿಗೆ 625 ಲೀಟರ್ ಮಿಶ್ರಣ ಬೇಕಾಗುತ್ತದೆ. ಒಂದು ಹೆಕ್ಟೇರಿಗೆ 25 ಕೆ.ಜಿ. 5% ಮ್ಯಾಲಾಥಿಯನ್ನು ಉದುರಿಸುವುದರಿಂದಲೂ ಈ ರೋಗವನ್ನು ತಡೆಗಟ್ಟಬಹುದು.

ತೊಗರಿಬೇಳೆಯಲ್ಲಿರುವ ಪೋಷಕಾಂಶಗಳು :
ನೀರು	......	10.5% - 15.2%
ಪ್ರೋಟೀನ್	......	20.0% - 22.3%
ಕೊಬ್ಬು	......	1.0% - 1.7%
ಖನಿಜಗಳು	......	3.0% - 3.6%
ಪಿಷ್ಟ	......	54.0% - 57.2%
ಸುಣ್ಣ	......	8.0% - 9.14%
ರಂಜಕ	......	0.26%
ನಾರು	......	1.0% - 1.2%
ಬೂದಿ	......	1.8% - 3.0%
ವೈಟಮಿನ್ ಎ- 220. ಐ.ಯು./100 ಗ್ರಾಮ್
ವೈಟಮಿನ್ ಬಿ- 151. ಎ.ಯು./100 ಗ್ರಾಮ್
(ಜಿ.ಬಿ.; ಕೆ.ಆರ್.ಜಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ